ಪರ್ಸಿಯಸ್ -
ಉತ್ತರಾಕಾಶದ ಪ್ರಧಾನ ನಕ್ಷತ್ರಪುಂಜಗಳ ಪೈಕಿ ಒಂದು ವಿಷುವದಂಶ 3 ಗಂ. ಘಂಟಾವೃತ್ತಾಂಶ 450 ಉ. ಆಕಾಶಗಂಗೆಯ (ಮಿಲ್ಕಿವೇ) ಹಾದಿಯಲ್ಲಿ ಆರೀಗ ಮತ್ತು ಆಂಡ್ರೂಮಿಡ ಪುಂಜಗಳ ನಡುವೆ ಇದೆ. ಈ ಪುಂಜದ 130ಕ್ಕೂ ಹೆಚ್ಚಿನ ನಕ್ಷತ್ರಗಳು ಬರಿ ಕಣ್ಣಿಗೆ ಕಾಣಿಸುತ್ತವೆ. ಗ್ರೀಕರ ಪುರಾಣದ ರೀತ್ಯ ಹಾವುಗೂದಲಿನ ಮೂವರು ರಾಕ್ಷಸಸ್ತ್ರೀಯರ ಪೈಕಿ ಮಿಡ್ಯೂಸ ಎಂಬಾಕೆಯನ್ನು ಸಂಹರಿಸಿದ ಪರ್ಷಿಯಸ್ ಎಂಬಾತನನ್ನು ಈ ಪುಂಜ ಪ್ರತಿನಿಧಿಸುತ್ತದೆ. ಮಿಡ್ಯೂಸಳನ್ನು ಸಂಹರಿಸಿ ಪರ್ಸಿಯನ್ ಹಿಂದಿರುಗುತ್ತಿದ್ದಾಗ ಕಡಲದೈತ್ಯವೊಂದರ (ಪೆಗಸಸ್) ಅಪಾಯದಿಂದ ಆಂಡ್ರುಮಿಡ (ನೋಡಿ- ಆಂಡ್ರೊಮಿಡ) ರಾಜಕುಮಾರಿಯನ್ನು ಪಾರುಮಾಡಿದ ಎಂಬ ಕಥೆಯೂ ಉಂಟು. ಈ ಪುಂಜದ ಎರಡು ನಕ್ಷತ್ರಗಳು ಎರಡನೆಯ ಕಾಂತಿ ವರ್ಗದ ನಕ್ಷತ್ರದಷ್ಟು ಪ್ರಕಾಶಬೀರುತ್ತವೆ. ಇವುಗಳಲ್ಲಿ ಒಂದು ಮಿಡ್ಯೂಸಳ ಶಿರವನ್ನು ಪ್ರತಿನಿಧಿಸುತ್ತದೆ. ಇದೇ ಚರಕಾಂತಿಯ ಅಲ್ಗಾಲ್  ನಕ್ಷತ್ರ. (ನೋಡಿ- ಅಲ್ಗಾಲ್-ನಕ್ಷತ್ರ) ಇನ್ನೊಂದು ಮಿರ್‍ಫಾಕ್. ಪರ್ಸಿಯನ್ ಪುಂಜದ ಹೆಚ್ಚಿನ ಪ್ರಕಾಶಮಯ ನಕ್ಷತ್ರಗಳ ಪ್ರದೇಶವನ್ನು ದೂರದರ್ಶಕದ ಮೂಲಕ ವೀಕ್ಷಿಸಿದರೆ ದೃಶ್ಯ ಆಕರ್ಷಕವಾಗಿರುತ್ತದೆ. ಈ ಪುಂಜದ ಪ್ರಧಾನ ನಕ್ಷತ್ರಗಳಿಗೂ ಕೆಶಿಯೋಪಿಯ (ನೋಡಿ- ಕೆಶ್ಯಿಯೋಪಿಯ) ನಕ್ಷತ್ರಪುಂಜಕ್ಕೂ ನಡುವೆ ಇರುವ ಯಮಳಗುಚ್ಛ ಬರಿಯ ಕಣ್ಣಿಗೆ ಮಸುಕುಬಿಂದುವಾಗಿ ಕಾಣಿಸಿವುದಾದರು ದೂರದರ್ಶಕ ಮೂಲಕ ಅಲ್ಲಿ ನೂರಾರು ಕಿರಿಯ ನಕ್ಷತ್ರಗಳು ಕಾಣಿಸುತ್ತವೆ. 1901ರಲ್ಲಿ ಅಲ್ಗಾಲ್ ನಕ್ಷತ್ರದ ಬಳಿ ನವತಾರೆ (ನೋವಾ) ಕಾಣಿಸಿಕೊಂಡು ಕೆಲವು ತಿಂಗಳುಗಳಲ್ಲೇ ಅದೃಶ್ಯವಾಯಿತೆನ್ನಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ